ವಿರಾಜಪೇಟೆ
	ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ದಕ್ಷಿಣ ಕೊಡಗು ಎಂದೂ ಕರೆಯುವ ಈ ತಾಲ್ಲೂಕನ್ನು ಪೂರ್ವದಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಮತ್ತು ಹೆಗ್ಗಡದೇವನಕೋಟೆ ತಾಲ್ಲೂಕುಗಳೂ ಉತ್ತರದಲ್ಲಿ ಸೋಮವಾರಪೇಟೆ ತಾಲ್ಲೂಕು ಮತ್ತು ಪಿರಿಯಾಪಟ್ಟಣ ತಾಲ್ಲೂಕಿನ ಸ್ವಲ್ಪ ಭಾಗವೂ ಪಶ್ಚಿಮ ಮತ್ತು ವಾಯವ್ಯ ದಲ್ಲಿ ಮಡಿಕೇರಿ ತಾಲ್ಲೂಕೂ ನೈಋತ್ಯ ಮತ್ತು ದಕ್ಷಿಣದಲ್ಲಿ ಕೇರಳ ರಾಜ್ಯವೂ ಸುತ್ತುವರಿದಿವೆ. ಅಮ್ಮತ್ತಿ, ವಿರಾಜಪೇಟೆ, ಪೊನ್ನಂಪೇಟೆ, ಬಾಳೆಲೆ, ಶ್ರೀಮಂಗಲ ಮತ್ತು ಹುದಿಕೇರಿ ಹೋಬಳಿಗಳಿದ್ದು 98 ಗ್ರಾಮಗಳೂ 3 ಪಟ್ಟಣಗಳೂ ಇವೆ. ತಾಲ್ಲೂಕಿನ ವಿಸ್ತೀರ್ಣ 1,619.8 ಚ.ಕಿಮೀ. ಜನಸಂಖ್ಯೆ 1,97,794.

	ಮಲೆನಾಡ ತೌರುಮನೆಯಾದ ಕೊಡಗಿನ ಈ ತಾಲ್ಲೂಕು ಬೆಟ್ಟಗುಡ್ಡಗಳಿಂದ ಕೂಡಿದೆ. ಕಣಿವೆ ಪ್ರದೇಶ ಮತ್ತು ಗುಡ್ಡಗಳ ಇಳಿಜಾರು ಪ್ರದೇಶ ಕಾಡುಗಳಿಂದ, ಬತ್ತದ ಗದ್ದೆಗಳಿಂದ ಮತ್ತು ಕಾಡುಗಳ ಮಧ್ಯ ಮಧ್ಯೆ ಇರುವ ಕಾಫಿ, ಕಿತ್ತಳೆಯ ತೋಟಗಳಿಂದ ಕಂಗೊಳಿಸುತ್ತದೆ. ಅಂಬಟೆಬೆಟ್ಟ, ಬೆಟ್ಟಂಗಾಲ, ಕುಂದದಬೆಟ್ಟ ಮತ್ತು ಸಿದ್ಧೇಶ್ವರ ಬೆಟ್ಟ ಈ ತಾಲ್ಲೂಕಿನ ಮುಖ್ಯ ಬೆಟ್ಟಗಳು. ವಿರಾಜಪೇಟೆಯ ಕಡೆಯಲ್ಲಿ ಬೆಪ್ಪುನಾಡು ಮತ್ತು ಕಡೈಟ್‍ನಾಡುಗಳಲ್ಲಿ ಅರಣ್ಯ ದಟ್ಟವಾಗಿಲ್ಲ. ಪೂರ್ವ ಎಲ್ಲೆಯ ಬಳಿ ಕಾವೇರಿ-ಲಕ್ಷ್ಮಣತೀರ್ಥ ನದಿಗಳ ನಡುವೆ ಪರ್ಣಪಾತಿ ವೃಕ್ಷಗಳ ವಿಶಾಲ ಕಾಡುಂಟು. ಇದರ ಪಶ್ಚಿಮದಲ್ಲಿ ನಿತ್ಯ ಹಸಿರು ಕಾಡು ಇದ್ದು ಬಿದಿರು ಮೆಳೆ ವಿಶೇಷವಾಗಿದೆ.

	ಕಾವೇರಿ, ಲಕ್ಷ್ಮಣತೀರ್ಥ ಮತ್ತು ಬರಪೊಳೆ ಈ ತಾಲ್ಲೂಕಿನ ಮುಖ್ಯ ನದಿಗಳು. ಕಾವೇರಿ ಹಲುಗುಂದ ಗ್ರಾಮದ ಉತ್ತರದಲ್ಲಿ ಈ ತಾಲ್ಲೂಕನ್ನು ಮುಟ್ಟುತ್ತದೆ. ಅನಂತರ ಮಡಿಕೇರಿ ಮತ್ತು ಸೋಮವಾರ ಪೇಟೆ ತಾಲ್ಲೂಕುಗಳನ್ನು ವಿರಾಜಪೇಟೆ ತಾಲ್ಲೂಕಿನಿಂದ ಬೇರ್ಪಡಿಸಿ ಗಡಿಯಾಗಿ ಈಶಾನ್ಯಾಭಿಮುಖವಾಗಿ ಹರಿಯವುದು. ನದಿಯ ಬಲದಂಡೆ ವಿರಾಜಪೇಟೆ ತಾಲ್ಲೂಕಿಗೆ ಸೇರಿದ್ದು ವ್ಯವಸಾಯಕ್ಕೆ ಅನುಕೂಲವಾಗಿದೆ. ಇದೇ ತಾಲ್ಲೂಕಿನ ಬ್ರಹ್ಮಗಿರಿ ಬೆಟ್ಟಸಾಲಿನ ದೆವಾಸಿಬೆಟ್ಟದ ಮುನಿಕಾಡು ಅರಣ್ಯದಲ್ಲಿ ಲಕ್ಷ್ಮಣತೀರ್ಥ ಹುಟ್ಟಿ ಪೂರ್ವಾಭಿಮುಖವಾಗಿ ಪ್ರವಹಿಸುತ್ತ, ಅರಕೆರೆ ಮತ್ತು ಹತುಗಟ್ಟು ಕಾಡುಗಳ ಮಧ್ಯೆ ಹರಿದು ಪಿರಿಯಾಪಟ್ಟಣ ತಾಲ್ಲೂಕನ್ನು ಪ್ರವೇಶಿಸುವುದು. ರಾಮತೀರ್ಥ ಮತ್ತು ಕರೆಹೊಳೆ ಎರಡು ಉಪನದಿಗಳು ಈ ನದಿಗೆ ಸೇರುವುವು. ವಿರಾಜಪೇಟೆಯ ಆಗ್ನೇಯ ಭಾಗಕ್ಕೆಲ್ಲ ಈ ನದಿಗಳ ನೀರಿನಾಶ್ರಯ ದೊರೆತಿದೆ. ಈ ತಾಲ್ಲೂಕಿನ ಮತ್ತೊಂದು ಮುಖ್ಯ ನದಿ ಬರಪೊಳೆ. ಲಕ್ಷ್ಮಣತೀರ್ಥ ಮತ್ತು ಪಾಪನಾಶಿನಿ ಹುಟ್ಟುವೆಡೆಯಲ್ಲೇ ಈ ನದಿಯೂ ಹುಟ್ಟಿ ಪಶ್ಚಿಮಾಭಿ ಮುಖವಾಗಿ ಹರಿಯುವುದು. ಕೇರಳವನ್ನು ಪ್ರವೇಶಿಸುವ ಮುನ್ನ ಬರಪೊಳೆ ಸುಮಾರು ಮೂರು ಕಿಮೀ ದೂರ ಕೊಡಗಿನ ತೀರದ ಗಡಿಯಾಗಿ ಹರಿಯುವುದು. ದಟ್ಟಕಾಡಿನ ಮಧ್ಯೆ ಈ ನದಿ ಹರಿದರೂ ಇದರ ಎಡಬಲ ದಂಡೆಗಳಲ್ಲಿರುವ ವ್ಯವಸಾಯ ಭೂಮಿಗೆ ನೀರುಣಿಸುತ್ತದೆ. ಜಲ ಮತ್ತು ಸಸ್ಯ ಸಮೃದ್ಧವಾದ ಈ ತಾಲ್ಲೂಕಿನಲ್ಲಿ ಮಳೆ ಹೆಚ್ಚು. ವಾರ್ಷಿಕ ಮಳೆ ಸು. 2,839.40 ಮಿಮೀ.

	ತಾಲ್ಲೂಕಿನಲ್ಲಿ ಬತ್ತಕ್ಕೆ ಬೇಕಾದಂಥ ಭೂಮಿ ಮತ್ತು ಜಲಪೂರೈಕೆ ಸಮೃದ್ಧಿಯಾಗಿದ್ದು ಅದೇ ಮುಖ್ಯ ಬೆಳೆಯಾಗಿದೆ. ಜೊತೆಗೆ ಕಾಫಿ, ಮೆಣಸು, ಏಲಕ್ಕಿ ಮತ್ತು ಕಿತ್ತಳೆ ಮುಖ್ಯ ತೋಟದ ಬೆಳೆಗಳು. ಇವಲ್ಲದೆ ಬಾಳೆ, ಸ್ವಲ್ಪ ಅಡಕೆ, ಹಲಸು ಮುಂತಾದವನ್ನೂ ಬೆಳೆಯುವು ದುಂಟು. ಈ ತಾಲ್ಲೂಕಿನಲ್ಲಿ ಜೇನುಸಾಕಣೆ, ಪಶುಪಾಲನೆ ಮತ್ತು ಮತ್ಯೋದ್ಯಮ ಸಾಮಾನ್ಯ. ಕೈಗಾರಿಕೆ ಅಷ್ಟಾಗಿ ಅಭಿವೃದ್ಧಿಯಾಗಿಲ್ಲ.

	ವಿರಾಜಪೇಟೆ ದಕ್ಷಿಣದಲ್ಲಿ 10 ಕಿಮೀ ದೂರದಲ್ಲಿರುವ ಹೆಗ್ಗಾಲ ಗ್ರಾಮವು ಹೆಗ್ಗಾಲ (ಹೆಗ್ಗಾಲ ಪಾಸ್) ಕಣಿವೆ ಮಾರ್ಗದಿಂದಾಗಿ ಪ್ರಸಿದ್ಧ ವಾಗಿದೆ. ಈ ಮಾರ್ಗದ ಮೂಲಕವೇ ಟಿಪ್ಪುಸುಲ್ತಾನ್ ಕೊಚ್ಚಿನ್ ಮತ್ತು ತಿರುವಾಂಕೂರು ರಾಜರ ಮೇಲೆ ದಂಡೆತ್ತಿ ಹೋಗಿದ್ದನೆಂದೂ ಬ್ರಿಟಿಷರ ಸೈನ್ಯ ಸಹ ಕಣ್ಣಾನೂರಿನಿಂದ ಶ್ರೀರಂಗಪಟ್ಟಣಕ್ಕೆ ಇದೇ ಮಾರ್ಗದಲ್ಲಿ ಸಾಗಿತ್ತೆಂದೂ ತಿಳಿದುಬರುತ್ತದೆ. ವಿರಾಜಪೇಟೆಯ ವಾಯವ್ಯ ದಲ್ಲಿ 6 ಕಿಮೀ ದೂರದಲ್ಲಿರುವ ಅರಮೇರಿ ಗ್ರಾಮದ ಬಳಿ ಬೃಹತ್ ಶಿಲಾ ಸಮಾಧಿಯುಗದ ಕಲ್ಲುಗುಡ್ಡೆ ಸಮಾಧಿಗಳು ದೊರಕಿದ್ದು ಇಲ್ಲಿಯ ಇತಿಹಾಸಪೂರ್ವ ಸ್ಥಳಚರಿತ್ರೆಯ ವಿಷಯಗಳ ಮೇಲೆ ಬೆಳಕು ಚೆಲ್ಲಿವೆ. ವಿರಾಜಪೇಟೆಯ ಉತ್ತರದಲ್ಲಿ 13 ಕಿಮೀ ದೂರದಲ್ಲಿರುವ ಬೈರಂಬಡ ಗ್ರಾಮದ ಸುಬ್ರಹ್ಮಣ್ಯ ದೇವಾಲಯ ಪ್ರಸಿದ್ಧವಾದದ್ದು. ವಿರಾಜಪೇಟೆಗೆ ಈಶಾನ್ಯದಲ್ಲಿ 16 ಕಿಮೀ ದೂರದಲ್ಲಿರುವ ಗುಯ್ಯ ಗ್ರಾಮದಲ್ಲಿರುವ ಅಗಸ್ತ್ಯೇಶ್ವರ ದೇವಾಲಯ ಹೆಸರಾದದ್ದು. ವಿರಾಜಪೇಟೆಯ ಆಗ್ನೇಯ ದಲ್ಲಿರುವ ಪೊನ್ನಂಪೇಟೆಗೆ 11 ಕಿಮೀ ಪೂರ್ವದಲ್ಲಿರುವ ಬೀಳೂರು ಗ್ರಾಮದಲ್ಲಿ 9ನೆಯ ಶತಮಾನಕ್ಕೆ ಸೇರಿದ ಗಂಗರ ಕೆಲವು ಶಾಸನಗಳಿವೆ. ಪೊನ್ನಂಪೇಟೆಯ ಈಶಾನ್ಯದಲ್ಲಿ 6 ಕಿಮೀ ದೂರದಲ್ಲಿರುವ ಧನುಗಾಲ ದಲ್ಲಿ ಟಿಪ್ಪುಸುಲ್ತಾನನ ಸೈನ್ಯ ಹಾಳುಗೆಡವಿದ, ಕೊಳ್ಳಿನಿಂಗ ಮತ್ತು ಬೆಣ್ಣೆಕೃಷ್ಣ ಇವರು ಕಟ್ಟಿದ್ದೆಂದು ಹೇಳುವ ಕೋಟೆಯ ಅವಶೇಷವಿದೆ. ತಾಲ್ಲೂಕಿನ ದಕ್ಷಿಣದಂಚಿನಲ್ಲಿದ್ದು ಪೊನ್ನಂಪೇಟೆಗೆ 35 ಕಿಮೀ ದೂರ ದಲ್ಲಿರುವ ಕುಟ್ಟ ಗ್ರಾಮದಲ್ಲಿ ಪ್ರತಿ ಮಾರ್ಚ್-ಏಪ್ರಿಲ್‍ನಲ್ಲಿ ನಡೆಯುವ ಕಾಳಿಕಾದೇವಿಯ ಜಾತ್ರೆ ಪ್ರಸಿದ್ಧ. ತಾಲ್ಲೂಕಿನ ದಕ್ಷಿಣದ ತುದಿಯಲ್ಲಿ ಪೊನ್ನಂಪೇಟೆಗೆ ದಕ್ಷಿಣದಲ್ಲಿ 24 ಕಿಮೀ ದೂರದಲ್ಲಿರುವ ಕುರ್ಚಿ ಗ್ರಾಮದ ಬಳಿ ಶ್ರೀರಾಮನಿಂದ ಸ್ಥಾಪಿತವಾದ್ದೆಂದು ಹೇಳುವ ಶಿವದೇವಾಲಯವಿದ್ದು ಶಿವರಾತ್ರಿಯಂದು ಸಣ್ಣ ಜಾತ್ರೆ ನಡೆಯುತ್ತದೆ. ಪೊನ್ನಂಪೇಟೆಯ ದಕ್ಷಿಣದಲ್ಲಿ 10 ಕಿಮೀ ದೂರದಲ್ಲಿರುವ ಹುದಿಕೇರಿ ಹಿಂದೆ ಕಿಗ್ಗಟ್‍ನಾಡು ತಾಲ್ಲೂಕಿನ ಆಡಳಿತ ಕೇಂದ್ರವಾಗಿತ್ತು. ಪೊನ್ನಂಪೇಟೆಗೆ ದಕ್ಷಿಣದಲ್ಲಿ 3 ಕಿಮೀ ದೂರದಲ್ಲಿರುವ ಚಿಕ್ಕಮಂಡೂರು ಗ್ರಾಮದ ಬಳಿ ಇತಿಹಾಸ ಪೂರ್ವ ಶಿಲಾಸಮಾಧಿಗಳು ಇರುವುದು ಪತ್ತೆಯಾಗಿದೆ. ಈ ತಾಲ್ಲೂಕಿನಲ್ಲಿ ಪ್ರಸಿದ್ಧ ನಾಗರಹೊಳೆ ಅಭಯಾರಣ್ಯ ಪ್ರದೇಶವಿದೆ. ಪೊನ್ನಂ ಪೇಟೆಯ ಆಗ್ನೇಯಕ್ಕೆ 35 ಕಿಮೀ ದೂರದಲ್ಲಿರುವ ಈ ಅರಣ್ಯ ಪ್ರದೇಶ ಪ್ರವಾಸಿಗಳ ಕೇಂದ್ರವಾಗಿದೆ. ಪೊನ್ನಂಪೇಟೆ ಹೋಬಳಿಗೆ ಸೇರಿದ ಕುಟ್ಟಂಡಿ ಗ್ರಾಮದ ಬಳಿ ಬರಪೊಳೆ ಜಲವಿದ್ಯುತ್ ಕೇಂದ್ರ ಸ್ಥಾಪನೆಯ ಯೋಜನೆ ಕೈಗೊಳ್ಳಲಾಗಿದೆ. ಈ ಗ್ರಾಮ ಮತ್ತು ಜಲವಿದ್ಯುತ್ ಕೇಂದ್ರದ ಸ್ಥಳ ವಿರಾಜಪೇಟೆಯ ಆಗ್ನೇಯಕ್ಕೆ 16 ಕಿಮೀ ದೂರದಲ್ಲಿದೆ. ವಿರಾಜಪೇಟೆಯ ಆಗ್ನೇಯಕ್ಕೆ 5 ಕಿಮೀ ದೂರದಲ್ಲಿರುವ ಚಿಟ್ಟಂಗಾಲ ಗ್ರಾಮದ ಬಳಿ ಅಭಯಾರಣ್ಯ ಪ್ರದೇಶದ ಪ್ರಕೃತಿಸೌಂದರ್ಯ ಹೆಸರಾದದ್ದು. ಇಲ್ಲಿಂದ ಬರಪೊಳೆಯ ಸರತಾಭಿ ಜಲಪಾತಕ್ಕೆ ಮಾರ್ಗವುಂಟು. ವಿರಾಜಪೇಟೆಯ ಪೂರ್ವಕ್ಕೆ 16 ಕಿಮೀ ದೂರದಲ್ಲಿರುವ ಗೋಣಿಕೊಪ್ಪಲು ಒಂದು ವ್ಯಾಪಾರ ಕೇಂದ್ರ. ವಿರಾಜಪೇಟೆಯ ಆಗ್ನೇಯದಲ್ಲಿ 20 ಕಿಮೀ ದೂರದಲ್ಲಿರುವ ಪೊನ್ನಂಪೇಟೆ ಒಂದು ದೊಡ್ಡ ವ್ಯಾಪಾರಕೇಂದ್ರ. ವಿರಾಜಪೇಟೆಯ ದಕ್ಷಿಣಕ್ಕೆ ಇರುವ ವಾಟೆಕೊಲ್ಲಿ ಗ್ರಾಮ ಪೆರಿಯಂಬಾಡಿ ಘಾಟ್ ಮೂಲಕ ಕಣ್ಣಾನೂರಿಗೆ ಹೋಗುವ ಹೆದ್ದಾರಿಯಲ್ಲಿದೆ. ಹೆಚ್ಚು ಮಳೆ ಬೀಳುವ ಕೊಡಗಿನ ಭಾಗಮಂಡಲ ಬಿಟ್ಟರೆ ವಾಟೆಕೊಲ್ಲಿ ಎರಡನೆಯದು. ಇದನ್ನು ಕೊಡಗಿನ ಚಿರಾಪುಂಜಿ ಎಂದು ಕರೆಯುತ್ತಾರೆ.

	ವಿರಾಜಪೇಟೆ ಈ ತಾಲ್ಲೂಕಿನ ಆಡಳಿತ ಕೇಂದ್ರ. ತಾಲ್ಲೂಕಿನ ವಾಯವ್ಯದಲ್ಲಿ ಕಣ್ಣಾನೂರು-ಮಡಿಕೇರಿ, ಕಣ್ಣಾನೂರು-ಮೈಸೂರು ಹೆದ್ದಾರಿಯಲ್ಲಿರುವ ಈ ಪಟ್ಟಣ ಮಡಿಕೇರಿಯ ದಕ್ಷಿಣಕ್ಕೆ 32 ಕಿಮೀ ದೂರದಲ್ಲಿದೆ. ಜನಸಂಖ್ಯೆ 22,457.

	ಇದು ಕೊಡಗಿನ ಎರಡನೆಯ ಮುಖ್ಯ ಪಟ್ಟಣ. ಈ ಪಟ್ಟಣವನ್ನು ಕೊಡಗಿನ ದೊಡ್ಡ ವೀರ ರಾಜೇಂದ್ರ ಒಡೆಯ 1792ರಲ್ಲಿ ಬ್ರಿಟಿಷ್ ಸೈನ್ಯಾಧಿಕಾರಿಯಾಗಿದ್ದ ಜನರಲ್ ಸರ್ ರಾಬರ್ಟ್ ಅಬರ್‍ಕ್ರಾಂಬಿಯನ್ನು ಭೇಟಿಯಾದ ಸ್ಥಳದಲ್ಲೇ ಅದರ ನೆನಪಿಗಾಗಿ ಕಟ್ಟಿಸಿ, ವೀರರಾಜೇಂದ್ರಪೇಟೆ ಎಂದು ಹೆಸರಿಟ್ಟ. ಮುಂದೆ ಈ ಪಟ್ಟಣದ ಹೆಸರು ವಿರಾಜಪೇಟೆಯೆಂದು ಬಳಕೆಯಲ್ಲಿ ಬಂತು. ಈ ಪಟ್ಟಣದಲ್ಲಿ 1870ರಿಂದ ಪುರಸಭೆಯಿದೆ. ಇಲ್ಲಿಂದ ಕೇರಳದ ತಲೆಚೇರಿ, ಕಣ್ಣಾನೂರುಗಳಿಗೂ ಜಿಲ್ಲೆಯ ಮತ್ತು ನೆರೆಜಿಲ್ಲೆಯ ಎಲ್ಲ ಊರುಗಳಿಗೂ ವಾಹನ ಸಂಪರ್ಕವಿದ್ದು, ಇದು ಜಿಲ್ಲೆಯ ಒಂದು ಮುಖ್ಯ ವ್ಯಾಪಾರ ಕೇಂದ್ರವಾಗಿದೆ. ಕಾಫಿ, ಏಲಕ್ಕಿ, ಮೆಣಸು ಮತ್ತು ಅಕ್ಕಿ ಇಲ್ಲಿಯ ಮುಖ್ಯ ವ್ಯಾಪಾರ ಪದಾರ್ಥಗಳು. ಪಟ್ಟಣ ಮಲೆತಂಬಿರಾನ್ ಬೆಟ್ಟದ ಬುಡದಲ್ಲಿದೆ. ಇಲ್ಲಿಯ ರೋಮನ್ ಕೆಥೊಲಿಕ್ ಚರ್ಚ್ ಮತ್ತು ಗಡಿಯಾರದ ಗೋಪುರ ಆಕರ್ಷಣೀಯವಾಗಿವೆ.						
		(ಡಿ.ಎನ್.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ